ಕನ್ನಡ ನಾಡು | Kannada Naadu

ಬಡವರ ನಿರೀಕ್ಷೆಯ ಯಶಸ್ವಿನಿ ಯೋಜನೆಗೆ ಹೊಸ ರೂಪ:  ಚಿಕಿತ್ಸಾ ದರದಲ್ಲಿ ಪರಿಷ್ಕರಣೆ

07 Jun, 2024


ಬೆಂಗಳೂರು: ಬಡವರ ಆಶಾದಾಯಕ ದೃಷ್ಟಿಯಲ್ಲಿ ಕಾಯುತ್ತಿರುವ ಯಶಸ್ವಿನಿ ಯೋಜನೆಗೆ ಹೆಚ್ಚು ಆಧ್ಯತೆ ನೀಡುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ಕೊಟ್ಟಿದೆ. ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿಯಲ್ಲಿ ಬರುವ 200 ಕ್ಕೂ ಹೆಚ್ಚು ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡಿದೆ. ಇದರ ಜೊತೆಗೆ ಆಸ್ಪತ್ರೆಗಳು ಕೂಡ ಹೆಚ್ಚಾಗಿದ್ದು, ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಲಾಭವಾಗಲಿದೆ.
      2003ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತಾದರೂ, ಕಾರಣಾಂತರಗಳಿಂದ 2018ರಲ್ಲಿ ಸ್ಥಗಿತವಾಗಿತ್ತು. ಬಳಿಕ ರಾಜ್ಯದ ಸರ್ಕಾರವು 2023ರ ಜನವರಿಯಲ್ಲಿ ಸಹಕಾರ ಸಂಘದ ಅಡಿಯಲ್ಲಿ ಮರುಜಾರಿಗೊಳಿಸಿತ್ತು. 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಮಾರ್ಚ್‌ 31ರ ವರೆಗೆ ವಿಸ್ತರಣೆಯಾಗಿತ್ತು.ಇದರ ಬೆನ್ನಲ್ಲೇ, 200 ಕ್ಕೂ ಹೆಚ್ಚು ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡಲಾಗಿದೆ. 


           ಯಶಸ್ವಿನಿ ಯೋಜನೆಯಡಿ ಬರುವ ದರ ಕಡಿಮೆಯಿದ್ದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರ ಯೋಜನೆಯ ಚಿಕಿತ್ಸಾ ದರವನ್ನು 300% ವರೆಗೂ ಹೆಚ್ಚಳ ಮಾಡಿದೆ. ಪರಿಣಾಮ 370 ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ 600ರ ಗಡಿ ದಾಟಿದೆ ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
     ಯಶಸ್ವಿನಿ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್‌ವರ್ಕ್‌ ಆಸ್ಪತ್ರೆಗಳು ನೋಂದಣಿಯಾಗಿದ್ದು, ಇದರಲ್ಲಿ 602 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ.
        ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಯಶಸ್ವಿನಿ ಕಾರ್ಡ್ ಹೊಂದಿರುವ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ವ್ಯಕ್ತಿಯು ನೋಂದಣಿ ಮಾಡಿಕೊಂಡಿರುವ ನೆಟ್‌ವರ್ಕ್‌ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭವಾಗಿ ದೊರೆಯಲಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by